ಮನಸಾ
ಕಾಶ್ಯಪನ ಮಗಳು. ಒಮ್ಮೆ ಲೋಕದಲ್ಲಿ ಸರ್ಪಗಳ ಹಾವಳಿ ಹೆಚ್ಚಿ ಜನ ಭೀತರಾಗಿ ಕಾಶ್ಯಪನನ್ನು ಮೊರೆಹೊಕ್ಕರು. ಆಗ ಇವನು ಬ್ರಹ್ಮನನ್ನು ಸ್ತುತಿಸಿ ವಿಷ ಪರಿಹಾರಕ ಮಂತ್ರಗಳನ್ನು ಸ್ಮರಿಸಿ ಮಂತ್ರಾಧಿಷ್ಠಾನ ದೇವತೆಯನ್ನು ಮನಸ್ಸಿನಲ್ಲಿಯೇ ಸೃಷ್ಟಸಿದ. ಈ ಕಾರಣದಿಂದ ಈಕೆ ಮನಸಾ ಆದಳು. ಈಕೆ ಜನಿಸಿದ ಕೂಡಲೇ ಕೈಲಾಸಕ್ಕೆ ಹೋಗಿ ತಪಿಸ್ಸಿನಿಂದ ಶಿವನನ್ನು ಮೆಚ್ಚಿಸಿ ಆತನಿಂದ ಅಷ್ಟಾಕ್ಷರಿ ಮಂತ್ರದ ಉಪದೇಶ ಪಡೆದಳು. ಈಕೆ ಪುಷ್ಕರ ಕ್ಷೇತ್ರದಲ್ಲಿ ಮೂರು ಯುಗ ಪರ್ಯಂತ ತಪಸ್ಸು ಮಾಡಿ ಪರಮಾತ್ಮಾನುಸಂಧಾನ ಮಾಡಿದುದರಿಂದಲೂ ಮನಸಾ ಎಂಬ ಹೆಸರು ಅನ್ವರ್ಥವಾಯಿತು. ಅನೇಕ ವರ್ಷಗಳ ತಪಸ್ಸಿನಿಂದಾಗಿ ಈಕೆಯ ಶರೀರ ಕೃಶವಾಗಿತ್ತಾದ್ದರಿಂದ ವಿಷ್ಣು `ಜರತ್ಕಾರು ಎಂಬುದಾಗಿ ಸಂಬೋಧಿಸಿ ಬೇಡಿದ ವರವನ್ನು ಕೊಟ್ಟ. ಮೂರುಲೋಕಗಳಲ್ಲಿಯೂ ಇವಳ ಸೌಂದರ್ಯವನ್ನು ಮೀರಿಸಲು ಆಗದಿದ್ದುದರಿಂದ ತ್ರಿಜಗದ್ಗೌರಿ ಎಂಬ ಹೆಸರು ಸಂದಿತು. ಪರೀಕ್ಷಿದ್ರಾಜನ ಸರ್ಪಯಾಗದಲ್ಲಿ ಹತವಾದ ಸರ್ಪಗಳನ್ನು ರಕ್ಷಿಸಿದ್ದರಿಂದ ನಾಗಮಾತೆ ಎನಿಸಿದಳು. ಈಕೆಗೆ ನಾಗಭಗಿನಿ, ವಿಷಹರೆ, ಮೃತ್ಯುಸಂಜೀವಿನಿ, ಸಿದ್ಧಯೋಗಿನಿ, ಯೋಗಿನಿ, ಜರತ್ಕಾರಪ್ರಿಯೆ, ಜರತ್ಕಾರು, ವೈಷ್ಣವಿ, ಶೈವಿ, ನಾಗೇಶ್ವರಿ, ಆಸ್ತಿಕಮಾತೆ ಎಂಬ ನಾನಾ ಹೆಸರುಗಳಿವೆ. ಹಾವು ಕಚ್ಚಿದಾಗ ಮೇಲಿನ ಹೆಸರುಗಳನ್ನು ಭಕ್ತಿಯಿಂದ ಪಠಿಸಿದವರಿಗೆ ನಾಗಬಾಧೆ ಇರುವುದಿಲ್ಲ; ಹಾವು ಕಚ್ಚಿದ ವಿಷ ಪರಿಹಾರವಾಗುವುದೆಂದು ದೇವೀಭಾಗವತದಲ್ಲಿ ಹೇಳಿದೆ.
(ಕೆ.ಆರ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ